ಬಂಟ್ವಾಳ ತಾಲೂಕು ಸಜೀಪಮೂಡ ಗ್ರಾಮದ ಅನ್ನಪ್ಪಾಡಿ ಎಂಬಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶ್ರೀ ಬಾಲಗಣಪತಿ ದೇವಸ್ಥಾನವು ಸುಮಾರು 4 ವರ್ಷಗಳ ಹಿಂದೆ ಪುನರ್ ನಿರ್ಮಾಣಗೊಂಡು, ಸಾನ್ನಿಧ್ಯದ ಬ್ರಹ್ಮಕಲಶೋತ್ಸವವು ಶ್ರದ್ಧಾಭಕ್ತಿಯಿಂದ ನಡೆದಿರುತ್ತದೆ. ಪ್ರಸಿದ್ಧ ಶ್ರದ್ಧಾಕೇಂದ್ರವಾದ ಈ ದೇವಾಲಯಕ್ಕೆ ಹಲವಾರು ಶತಮಾನಗಳ ಇತಿಹಾಸವಿರುತ್ತದೆ. ಈ ಕ್ಷೇತ್ರದ ಬಗ್ಗೆ ಶರವು ಕ್ಷೇತ್ರ ಮಹಾತ್ಮೆಯಲ್ಲಿ ಉಲ್ಲೇಖವೂ ಇದೆ. ಈ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ವಿಶೇಷವಾಗಿ ಶ್ರೀ ಬಾಲಗಣಪತಿ ದೇವರ ಪ್ರಧಾನ ಏಕದೇವ ದೇವಾಲಯವಾಗಿರುತ್ತದೆ. ಪಶ್ಚಿಮಾಭಿಮುಖವಾಗಿ ಇರುವ ಈ ದೇವಸ್ಥಾನದಲ್ಲಿ ಲಿಂಗರೂಪದ ಶ್ರೀ ಬಾಲಗಣಪತಿಯ ಆರಾಧನೆಯಾಗುತ್ತಿದೆ.
ನಾವು ಮಾಡುವ ಯಾವುದೇ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲು ಪ್ರಥಮ ಪೂಜಿತ ಗಣಪತಿ ಆರಾಧನೆ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಂತಹ ಸಂಪ್ರದಾಯ. ಆಧ್ಯಾತ್ಮಿಕ ಪರಂಪರೆಯಲ್ಲಿ ಗಣಪತಿಯ ಆರಾಧನೆಗೆ ವಿಶಿಷ್ಟ ಸ್ಥಾನಮಾನ ಇದೆ. ಗಣಪತಿ ಆರಾಧನೆ ಜಪ-ಯಜ್ಞ-ಹವನ-ಹೋಮದ ಮೂಲಕ ನಮಸ್ಕಾರ-ತರ್ಪಣ-ಅರ್ಚನೆ-ಪೂಜೆಯೊಂದಿಗೆ ನಡೆಯುತ್ತದೆ. ವಿದ್ಯಾರ್ಜನೆಗಾಗಿ, ಸಂತಾನ ಪ್ರಾಪ್ತಿಗಾಗಿ, ವಿವಾಹ ಪ್ರತಿಬಂಧಕ ದೋಷ ನಿವಾರಣೆಗಾಗಿ, ಉದ್ಯೋಗಕ್ಕಾಗಿ, ವ್ಯಾಪಾರ-ವ್ಯವಹಾರ ಅಭಿವೃದ್ಧಿಗಾಗಿ ಈ ದೇವಾಲಯದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಜರಗುವ ಶ್ರೀ ಬಾಲಗಣಪತಿ ಹವನವು ಅತ್ಯಂತ ಪವಿತ್ರ ದೇವತಾ ಕಾರ್ಯ. ಭಕ್ತರ ಇಷ್ಟಾರ್ಥಗಳ ಈಡೇರಿಕೆಗಾಗಿ ನಡೆಯುವ ಈ ಹವನದಿಂದ ಶೀಘ್ರವಾಗಿ ಇಷ್ಟಾರ್ಥ ಸಿದ್ಧಿಗಣಪತಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ.
ದೇವಾಲಯದ ನಾಲ್ಕನೇ ವರುಷದ ಜಾತ್ರೋತ್ಸವ ಸಂಭ್ರಮವು 2025ರ ಡಿಸೆಂಬರ್ ತಿಂಗಳ 29ರಂದು ನಡೆಯಲಿದ್ದು, ಪೂರ್ವಭಾವಿಯಾಗಿ ತಾ. 28-12-2025ನೇ ಆದಿತ್ಯವಾರ ಕ್ಷೇತ್ರದಲ್ಲಿ ಶ್ರೀ ಬಾಲಗಣಪತಿ ಮೂಲಮಂತ್ರ ಲಕ್ಷ ಜಪ ಯಜ್ಞ-ದೂರ್ವ ಹೋಮ ನಡೆಸುವುದೆಂದು ನಿರ್ಧರಿಸಲಾಗಿದೆ. ದೂರ್ವ ಅಥವಾ ಗರಿಕೆಯ ಮಹತ್ವವೆಂದರೆ, ದೂ ಎಂದರೆ ದೂರವಿರುವುದು, ಅವಮ್ ಎಂದರೆ ಹತ್ತಿರ ತರುವುದು ಎಂದರ್ಥ. ದೂರದಲ್ಲಿರುವ ಗಣೇಶನ ಪವಿತ್ರಕಗಳನ್ನು ಹತ್ತಿರಕ್ಕೆ ತರುವುದು ಗರಿಕೆ ಅಥವಾ ದೂರ್ವ ಆಗಿದೆ. ಇದು ಗಣಪತಿಗೆ ಅತ್ಯಂತ ಪ್ರಿಯವಾದ ಪವಿತ್ರ ಗಿಡವಾಗಿದ್ದು, ಹಿಂದೂ ಪೂಜಾ ವಿಧಿಗಳಲ್ಲಿ ಶುಭ ಮತ್ತು ಅದೃಷ್ಟದ ಸಂಕೇತವೆನಿಸಿದೆ. ದೂರ್ವ ಅಥವಾ ಗರಿಕೆಯನ್ನು ಗಣಪತಿಗೆ ಅರ್ಪಿಸುವುದರಿಂದ ಗಣಪತಿ ದೇವರು ಶೀಘ್ರವಾಗಿ ಸಂತುಷ್ಟಗೊಳ್ಳುತ್ತಾರೆ ಎಂಬುದು ನಂಬಿಕೆ. ದೂರ್ವದಿಂದ ಹೋಮ ಮಾಡಿದರೆ ಆಯುಷ್ಯ ವೃದ್ಧಿ, ಗರಿಕೆಯಿಂದ ಅರ್ಚನೆ ಮಾಡಿದರೆ ಸರ್ವ ವಿಘ್ನಗಳೂ ಪರಿಹಾರವಾಗುತ್ತದೆ. ದೂರ್ವದಲ್ಲಿನ ಗರಿಕೆಯ ಮೂರು ದಳಗಳು ಬ್ರಹ್ಮ, ವಿಷ್ಣು ಮತ್ತು ಶಿವನ ಮೂರು ಮುಖ್ಯ ತತ್ವಗಳನ್ನು ಸೂಚಿಸುತ್ತದೆ. ಯಾವುದೇ ಮಂಗಳಕರ ಕಾರ್ಯವನ್ನು ಪ್ರಾರಂಭ ಮಾಡುವ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ ಹಾಗೂ ಇದರಲ್ಲಿ ಗರಿಕೆಯನ್ನು ಬಳಸಲಾಗುತ್ತದೆ.
ಬ್ರಹ್ಮಶ್ರೀ ನೀಲೇಶ್ವರ ಕೆ. ಯು. ಪದ್ಮನಾಭ ತಂತ್ರಿಗಳ ಮಾರ್ಗದರ್ಶನ ಹಾಗೂ ಸಜೀಪ ಮಾಗಣೆ ತಂತ್ರಿಗಳಾದ ಶ್ರೀ ಎಂ. ಸುಬ್ರಹ್ಮಣ್ಯ ಭಟ್ಟರ ಮುಂದಾಳತ್ವದೊಂದಿಗೆ ನಡೆಯುವ ಈ ಜಪ ಯಜ್ಞದಲ್ಲಿ ಒಂದು ಲಕ್ಷ ಅರ್ಚನೆ ಆಗಬೇಕೆನ್ನುವ ಸದುದ್ದೇಶದಿಂದ ಊರ-ಪರವೂರ ಭಗವದ್ಭಕ್ತರ ಇಷ್ಟಾರ್ಥಗಳು ಶೀಘ್ರವಾಗಿ ಸಿದ್ಧಿ ಆಗಬೇಕು ಎಂಬುದು ನಮ್ಮೆಲ್ಲರ ಮನೋಭಿಲಾಷೆ. ಈ ನಿಟ್ಟಿನಲ್ಲಿ ಭಗವದ್ಭಕ್ತರಾದ ತಾವುಗಳು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಹಾಗೂ ಸಹೃದಯರ ಸೇವೆಯನ್ನು ಮಾಡಿಸಿ ಈ ಪುಣ್ಯಪ್ರದವಾದ ಕಾರ್ಯದಲ್ಲಿ ನಮ್ಮೊಂದಿಗೆ ಕೈಜೋಡಿಸಿ ಶ್ರೀ ಬಾಲಗಣಪತಿ ಮೂಲಮಂತ್ರ ಲಕ್ಷ ಜಪ ಯಜ್ಞದ ಉದ್ದೇಶ ಯಶಸ್ವಿಗೊಳಿಸುವಲ್ಲಿ ತಮ್ಮ ಸಹಕಾರವನ್ನು ನೀಡಬೇಕಾಗಿ ವಿನಂತಿಸಿಕೊಳ್ಳುತ್ತಾ, ಶ್ರೀ ಬಾಲಗಣಪತಿ ದೇವರ ಅನುಗ್ರಹ ನಮಗೆಲ್ಲರಿಗೂ ದೊರೆಯಲಿ ಎಂಬುವುದು ನಮ್ಮ ಪ್ರಾರ್ಥನೆ.
ಅಧ್ಯಕ್ಷರು ಮತ್ತು ಸರ್ವಸದಸ್ಯರು
ಶ್ರೀ ಬಾಲಗಣಪತಿ ಸೇವಾ ಟ್ರಸ್ಟ್ ಅನ್ನಪ್ಪಾಡಿ
ಅಧ್ಯಕ್ಷರು ಮತ್ತು ಸರ್ವಸದಸ್ಯರು
ಶ್ರೀ ಬಾಲಗಣಪತಿ ಮೂಲಮಂತ್ರ ಲಕ್ಷ ಜಪ ಯಜ್ಞ ದೂರ್ವ ಹೋಮ ಸೇವಾ ಸಮಿತಿ
